ಮಂಗಳೂರು
ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಮುಖ್ಯ ಆಡಳಿತ ಕೇಂದ್ರ ನಗರ. ಪೂರ್ವದಲ್ಲಿ ಕಾರ್ಕಳ ಮತ್ತು ಬಂಟ್ವಾಳ ಉತ್ತರದಲ್ಲಿ ಉಡುಪಿ ತಾಲ್ಲೂಕುಗಳು, ದಕ್ಷಿಣದಲ್ಲಿ ಕೇರಳ ರಾಜ್ಯ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಈ ತಾಲ್ಲೂಕನ್ನು ಸುತ್ತುವರಿದಿವೆ. ಗುರುಪುರ, ಮಂಗಳೂರು-ಎ, ಮಂಗಳೂರು-ಬಿ, ಸುರತ್ಕಲ್ ಮತ್ತು ಮುಲ್ಕಿ ಹೋಬಳಿಗಳು. 7 ಪಟ್ಟಣಗಳು ಹಾಗು 102 ಗ್ರಾಮಗಳು ಇವೆ. ಒಟ್ಟು ವಿಸ್ತೀರ್ಣ 560 ಚಕಿಮೀ, ಜನಸಂಖ್ಯೆ 586,849 (1981).

	ಈ ತಾಲ್ಲೂಕು ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರಗಳ ನಡುವಿನ ಪಶ್ಚಿಮದಕಡೆಯ ಇಳಿಜಾರು ಮೈದಾನ ಪ್ರದೇಶದಲ್ಲಿದೆ. ಇದರ ಬಹುಭಾಗ ವಿಶಾಲ ಮಟ್ಟಸ ಪ್ರದೇಶಗಳು ಮತ್ತು ಮಧ್ಯೆ ಮಧ್ಯೆ ಗುಡ್ಡಗಳು ಇರುವ ಪ್ರದೇಶ. ನದಿಯ ದಡಗಳನ್ನು ಬಿಟ್ಟು ಇತರ ಕಡೆಗಳಲ್ಲಿ ಜಂಬುಮಣ್ಣಿನ ಭೂಮಿ ಕಂಡುಬರುತ್ತದೆ. ಗುರುಪುರ ಹೊಳೆ ಮತ್ತು ನೇತ್ರಾವತಿ ಇಲ್ಲಿಯ ಮುಖ್ಯ ನದಿಗಳು. ಗುರುಪುರ ಹೊಳೆ ಮೊದಲು ತಾಲ್ಲೂಕಿನ ಮಧ್ಯೆ ಅಡ್ಡವಾಗಿ ಹಾದು ಅನಂತರ ದಕ್ಷಿಣಾಭಿಮುಖವಾಗಿ ಕರಾವಳಿಗೆ ಸಮಾಂತರವಾಗಿ ಮಂಗಳೂರಿನ ದಕ್ಷಿಣ ತುದಿಯವರೆಗೂ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. ನೇತ್ರಾವತಿ ನದಿ ಬಂಟ್ವಾಳ ತಾಲ್ಲೂಕಿನಿಂದ ಹರಿದುಬಂದು ಮಂಗಳೂರು ತಾಲ್ಲೂಕಿನ ದಕ್ಷಿಣಭಾಗದಲ್ಲಿ ಅಡ್ಡ ಹಾದು ದಕ್ಷಿಣ ಭಾಗದಲ್ಲಿ ಗುರುಪುರ ಹೊಳೆಯನ್ನು ಸೇರುತ್ತದೆ. ಮುಲ್ಕಿ ನದಿ ಈ ತಾಲ್ಲೂಕನ್ನು ಉಡುಪಿ ಮತ್ತು ಕಾರ್ಕಳ ತಾಲ್ಲೂಕುಗಳಿಂದ ಬೇರ್ಪಡಿಸುವ ಉತ್ತರದ ಗಡಿ. ಕೆಲವು ಸಣ್ಣ ಪುಟ್ಟ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ. ಅಲ್ಲಿ ಈ ನದಿ ಮತ್ತು ತೊರೆಗಳ ಹರವು ವಿಶಾಲವಾಗಿದೆ. ನದಿಗಳ ಮಧ್ಯೆ ಅಲ್ಲಲ್ಲೇ ನೀರಿನ ಮಟ್ಟದಿಂದ ಕೆಲವೇ ಅಡಿಗಳ ಎತ್ತರವಿರುವ ಫಲವತ್ತಾದ ಕುದುರುಗಳು ಇವೆ.

	ಇಲ್ಲಿನ ವಾರ್ಷಿಕ ಸರಾಸರಿ ಮಳೆ 3,398 ಮಿಮೀ. ನೈರುತ್ಯಮಾರುತದಿಂದ ವಿಶೇಷ ಮಳೆಯಾಗುತ್ತದೆ. ಆಗ ನದಿ, ಝರಿಗಳೆಲ್ಲ ತುಂಬಿ ಹರಿಯುತ್ತವೆ. ಆದರೆ ಬೇಸಿಗೆಯಲ್ಲಿ ಕೆಲವೆಡೆ ಜಲಾಭಾವ ತೋರುವುದು ಉಂಟು. ತಾಲ್ಲೂಕಿನ ಒಟ್ಟು 55,380 ಹೆಕ್ಟೇರು ಪ್ರದೇಶದಲ್ಲಿ 9,835 ಹೆಕ್ಟೇರು ಬಂಜರು ಭೂಮಿ, 1,076 ಹೆಕ್ಟೇರು ಹುಲ್ಲುಗಾವಲು ಇದ್ದು 23,838 ಹೆಕ್ಟೇರು ಬೇಸಾಯ ಭೂಮಿ ಇದೆ. (1971-72), ಅರಣ್ಯ ಪ್ರದೇಶವಿಲ್ಲ. ಬತ್ತ ಇಲ್ಲಿಯ ಮುಖ್ಯ ಆಹಾರ ಬೆಳೆ. ಕುದುರುಗಳ ಹಾಗೂ ನದಿ ಝರಿಗಳ ದಂಡೆಗಳಲ್ಲಿ ಮಳೆಯನೀರಿನ ಆಸರೆಯಿಂದ ಬತ್ತವನ್ನು ಬೆಳೆಸುವ ರೂಢಿ ಇದೆ. ತೆಂಗು ಈ ತಾಲ್ಲೂಕಿನ ಇನ್ನೊಂದು ಮುಖ್ಯ ಬೆಳೆ. ಅಡಿಕೆ, ಗೇರುಬೀಜ, ಮೆಣಸು, ತರಕಾರಿಗಳು, ಮೆಣಸಿನಕಾಯಿ, ಶುಂಠಿ, ಮಾವು, ಬಾಳೆ, ಹಲಸು ಮುಂತಾದವನ್ನೂ ಬೆಳೆಸುತ್ತಾರೆ. ಮತ್ಸ್ಯೋದ್ಯಮ ಇಲ್ಲಿಯ ಒಂದು ಪ್ರಮುಖ ಕಸಬು. 

	ಈ ತಾಲ್ಲೂಕಿನ ಎಲ್ಲ ಗ್ರಾಮಗಳಿಗೂ ವಿದ್ಯುಚ್ಛಕ್ತಿಯ ಸಂಪರ್ಕವಿದ್ದು ಇಡೀ ಜಿಲ್ಲೆಯಲ್ಲೇ ಇದು ಕೈಗಾರಿಕೆಯಲ್ಲಿ ಮುಂದುವರಿದಿದೆ. ಗೇರುಬೀಜದ ಸಂಸ್ಕರಣ ಕಾರ್ಖಾನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಈಚೆಗೆ ನವಮಂಗಳೂರು ಬಂದರಿನಲ್ಲಿ ಬೃಹತ್ಪ್ರಮಾಣದ ರಾಸಾಯನಿಕ ಗೊಬ್ಬರ ತಯಾರಿಕಾ ಕಾರ್ಖಾನೆಯೊಂದು ಸ್ಥಾಪಿತವಾಗಿದೆ. ಕೈಮಗ್ಗದ ಬಟ್ಟೆ, ಮರದ ವಸ್ತುಗಳು, ತೆಂಗುನಾರಿನ ವಸ್ತುಗಳು, ಚಾಪೆ ಮತ್ತು ಚರ್ಮ ವಸ್ತುಗಳು ಮೊದಲಾದವನ್ನು ತಯಾರಿಸುವ ಉದ್ಯಮಗಳು ಇವೆ. ಹಲವು ಕಾಫಿ ಸಂಸ್ಕರಣ ಕೇಂದ್ರಗಳಿವೆ. ತಾಲ್ಲೂಕಿನ ವ್ಯವಸಾಯ ಮತ್ತು ಕೈಗಾರಿಕೋದ್ಯಮಗಳ ಅಭಿವೈದ್ಧಿಗೆ ಇಲ್ಲಿರುವ ಅನೇಕ ವಾಣಿಜ್ಯ ಬ್ಯಾಂಕುಗಳು ಸಹಕಾರಿಯಾಗಿವೆ.

	ಮಂಗಳೂರಿನಿಂದ ದಕ್ಷಿಣಕ್ಕೆ ಶೋರನೂರು ಕಡೆಗೆ ಹೋಗುವ ರೈಲುಮಾರ್ಗ ಈ ತಾಲ್ಲೂಕಿನಲ್ಲಿ ಕೆಲವೇ ಕಿಮೀಗಳಷ್ಟು ದೂರ ಮಾತ್ರ ಸಾಗುತ್ತದೆ. ಮಂಗಳೂರು-ಹಾಸನ ರೈಲುಮಾರ್ಗವಾಗಿದ್ದು ಮಂಗಳೂರು ಒಂದು ದೊಡ್ಡ ರೈಲ್ವೆ ಕೇಂದ್ರವಾಗುವುದರಲ್ಲಿದೆ. ತಾಲ್ಲೂಕಿನ ಸುಮಾರು ಎಲ್ಲ ಸ್ಥಳಗಳಿಗೂ ಉತ್ತಮ ರಸ್ತೆ ಜಾಲವಿದೆ. ಮಂಗಳೂರಿನಿಂದ ಕಾಸರಗೋಡು, ಬಂಟ್ವಾಳ, ಕಾರ್ಕಳ, ಉಡುಪಿ ಈ ಸ್ಥಳಗಳಿಗೆ ಹೋಗುವ ಮಾರ್ಗಗಳೇ ಈ ತಾಲ್ಲೂಕಿನ ಮುಖ್ಯ ರಸ್ತೆಗಳು, ಮಂಗಳೂರಿನ ಬಂದರು ನೌಕಾಸಂಪರ್ಕಕ್ಕೂ ವಿದೇಶ ವಾಣಿಜ್ಯಕ್ಕೂ ಉಪಯುಕ್ತವಾಗಿದೆ. ಅಂಚೆ, ತಂತಿ, ದೂರವಾಣಿ, ವಿದ್ಯುತ್ ಮುಂತಾದ ಆಧುನಿಕ ಸೌಕರ್ಯಗಳು, ಶಾಲೆ ಕಾಲೇಜುಗಳು ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಾಲಯಗಳು ತಾಲ್ಲೂಕಿನ ಹಲವು ಸ್ಥಳಗಳಲ್ಲಿವೆ. ವಿಶ್ವವಿದ್ಯಾಲಯವಿದೆ.

ದೇರೆಬೈಲು, ಪದವು ಕಂಕನಾಡಿ, ಮಂಗಳೂರು, ಉಳ್ಳಾಲ, ಮುಲ್ಕಿ ಮತ್ತು ಸೋಮೇಶ್ವರ ಇವು ಈ ತಾಲ್ಲೂಕಿನ ಪಟ್ಟಣಗಳು. ಅತ್ತೂರಿನಲ್ಲಿ ಪ್ರಸಿದ್ಧ ಸುರಗಿರಿ ಮಹಾಲಿಂಗೇಶ್ವರ ದೇವಾಲಯವಿದೆ. ಮಂಗಳೂರಿಗೆ 25 ಕಿಮೀ ದೂರದಲ್ಲಿರುವ ಬಚ್ಪೆಯಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಯ ಬಚ್ಪೆ ಜಲಪಾತ ಬಲು ರಮ್ಯ, ಗುರುಪುರ ನದಿಯ ದಡದಲ್ಲಿರುವ ಗುರುಪುರ ಒಂದು ಮುಖ್ಯಸ್ಥಳ. ಮಂಗಳೂರಿನ ದಕ್ಷಿಣಕ್ಕೆ 19 ಕಿಮೀ ದೂರದಲ್ಲಿರುವ ಹರೆಕಲ ಗ್ರಾಮದ ಬಳಿಯ ನರಹರಿಪರ್ವತದ ಮೇಲೆ ನರಸಿಂಹ ಮತ್ತು ಶಾರದಾಂಬೆ ದೇವಾಲಯಗಳಿವೆ. ಸಮುದ್ರ ದಂಡೆಯಲ್ಲಿರುವ ಈ ಪ್ರದೇಶ ಒಂದು ಆರೋಗ್ಯಧಾಮದಂತಿದೆ. ಮಂಗಳೂರಿನಿಂದ 27 ಕಿಮೀ ಪೂರ್ವದಲ್ಲಿ ನಂದಿನಿ ನದಿ ತೀರದಲ್ಲಿರುವ ಕಟೀಲು ಗ್ರಾಮದಲ್ಲಿ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಾಲಯವಿದೆ. ಮಂಗಳೂರಿನ ಈಶಾನ್ಯಕ್ಕೆ 19 ಕಿಮೀ ದೂರದಲ್ಲಿರುವ ಕಿನ್ನಿಗೋಳಿ ಗ್ರಾಮದ ಶ್ರೀರಾಮ ದೇವಾಲಯ ಹೆಸರಾದದ್ದು. ಮಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಮಳಲಿ ಗ್ರಾಮದ ಬಳಿ ಪ್ರಸಿದ್ಧವಾದ ಪೊಳಲಿ ರಾಜರಾಜೇಶ್ವರಿ ದೇವಾಲಯವಿದೆ. ಮಂಗಳೂರಿನಿಂದ 5 ಕಿಮೀ ದೂರದಲ್ಲಿರುವ ಪದವು ಗ್ರಾಮದಲ್ಲಿ ಕಾಫಿ ಸಂಸ್ಕರಣ ಕೇಂದ್ರ, ಗೇರು ಬೀಜದ ಕಾರ್ಖಾನೆ ಇವೆ. ಇಲ್ಲಿಯ ಶಕ್ತಿ ನಗರದಲ್ಲಿರುವ ರಮಾಶಕ್ತಿ ಮಿಷನ್ ಅನೇಕರನ್ನು ಆಕರ್ಷಿಸುತ್ತಿದೆ. ಮಂಗಳೂರಿನ ಉತ್ತರಕ್ಕೆ 9ಕಿಮೀ ದೂರದಲ್ಲಿರುವ ಪಣಂಬೂರು ಫಲ್ಗುಣಿ ನದಿಯ ದಡದಲ್ಲಿರುವ ಒಂದು ವ್ಯಾಪಾರ ಕೇಂದ್ರ. ಪಣಂಬೂರಿನಲ್ಲಿ ದೊಡ್ಡ ಸರ್ವಋತು ಬಂದರು ಮತ್ತು ಗೊಬ್ಬರ ಕಾರ್ಖಾನೆ ನಿರ್ಮಾಣವಾಗಿವೆ. ಕೇಂದ್ರ ಸರ್ಕಾರ ಇಲ್ಲೊಂದು ಪ್ರೌಢಶಾಲೆಯನ್ನು ನಡೆಸುತ್ತಿದೆ. ಸುರತ್ಕಲ್ಲು ಒಂದು ವ್ಯಾಪಾರ ಮತ್ತು ವಿದ್ಯಾಭ್ಯಾಸ ಕೇಂದ್ರ. ಉಳ್ಳಾಲ ಇತಿಹಾಸ ಪ್ರಸಿದ್ಧ ಸ್ಥಳ ಹಾಗೂ ವ್ಯಾಪಾರ ಕೇಂದ್ರ.
(ಎ.ಜಿ.ಕೆ.)

	ಮಂಗಳೂರು ನಗರ ಈ ತಾಲ್ಲೂಕಿನ ಮತ್ತು ದಕ್ಷಿಣ ಕನ್ನಡಜಿಲ್ಲೆಯ ಆಡಳಿತ ಕೇಂದ್ರ. ಪಶ್ಚಿಮ ಕರಾವಳಿಯ ಒಂದು ಮುಖ್ಯ ರೇವುಪಟ್ಟಣ. ಇದು ಬೆಂಗಳೂರಿಗೆ ಪಶ್ಚಿಮದಲ್ಲಿ 363 ಕಿಮೀ ದೂರದಲ್ಲೂ ಮುಂಬಯಿಯ ದಕ್ಷಿಣಕ್ಕೆ 673 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 172,252 (1981). 1971ರ ಜನ ಗಣತಿಯಿಂದಲೆ ದೇರೆಬೃಲು ಕಂಕನಾಡಿ. ಸೋಮೇಶ್ವರ ಮತ್ತು ಉಳ್ಳಾಳನ್ನು ನಗರ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.

	ಮಂಗಳೂರು ಕರ್ನಾಟಕದ ಪಶ್ಚಿಮಕರಾವಳಿಯ ಸುಂದರ ನಗರವೆಂದು ಪ್ರಸಿದ್ಧ. ಈ ಪಟ್ಟಣ ಗುರುಪುರ ಮತ್ತು ನೇತ್ರಾವತಿ ನದಿಗಳು ಕೂಡಿ ಏಕಮುಖವಾಗಿ ಸೇರುವೆಡೆ ಇದ್ದು ಪಶ್ಚಿಮ ಮತ್ತು ದಕ್ಷಿಣದಲ್ಲಿ ಹರಡಿರುವ ಈ ನದಿಗಳ ಹಿನ್ನೀರ ಹರವಿನಿಂದಲೂ ಆಗ್ನೇಯ ದಿಕ್ಕಿನಲ್ಲಿ ಫಲವತ್ತಾದ ಕೃಷಿಪ್ರದೇಶಗಳಿಂದಲೂ ಉತ್ತರ ಮತ್ತು ಈಶಾನ್ಯಗಳ ನಡುವೆ ಹಬ್ಬಿರುವ ಸಾಮನ್ಯ ಬೆಟ್ಟಗಳು ಮತ್ತು ಅವುಗಳ ಮಧ್ಯದ ಹಸುರು ತುಂಬಿದ ಸುಂದರ ಕಣಿವೆಗಳಿಂದಲೂ ಕೂಡಿದ್ದು ಎಲ್ಲೆಡೆ ತೆಂಗು, ಅಡಿಕೆ ಮತ್ತು ಇತರ ಮರಗಳಿಂದ ಆವೃತವಾಗಿ ಕಂಗೊಳಿಸುತ್ತದೆ. ಇಲ್ಲಿ ಸಾಮಾನ್ಯವಾಗಿ ಉತ್ತಮ ಹವಾಗುಣವಿದೆಯಾದರೂ ಬೇಸಗೆಯಲ್ಲಿ ಸೆಖೆ ಹೆಚ್ಚು.

	ಮಂಗಳೂರಿನಲ್ಲಿ ನಗರ ಸಭಾಡಳಿತವಿದೆ. ಇದೊಂದು ವ್ಯಾಪಾರ ವಾಣಿಜ್ಯ ಹಾಗೂ ಕೈಗಾರಿಕಾ ನಗರ. ಇಲ್ಲಿ ಹಂಚನ್ನು ತಯಾರಿಸುವ 43 ಕಾರ್ಖಾನೆಗಳಿವೆ (1972). ಶ್ರೀಲಂಕಾ, ಬರ್ಮಾ, ಪೂರ್ವ ಆಫ್ರಿಕಾ, ಆಸ್ಟ್ರೇಲಿಯಗಳಿಗೆ ಇಲ್ಲಿಂದ ಹಂಚು ರಫ್ತಾಗುತ್ತದೆ. ಗೋಡಂಬಿ ಕಾರ್ಖಾನೆಗಳೂ ಇಲ್ಲಿವೆ. ಬೀಡಿ ತಯಾರಿಕೆಗೂ ಮಂಗಳೂರು ಪ್ರಸಿದ್ದ. ಮೋಟಾರ್ ಬಿಡಿ ಭಾಗಗಳ ತಯಾರಿಕೆ, ಚಿಕ್ಕ ದೋಣಿಗಳನ್ನೂ ನಾಡ ದೋಣಿಗಳನ್ನೂ ಕಟ್ಟುವುದು, ಕೈಮಗ್ಗದ ಲುಂಗಿ, ಗುಂಡಿ, ಬೆತ್ತದ ಕುರ್ಚಿ, ಪ್ಲಾಸ್ಟಿಕ್ ಸಾಮಾನುಗಳ ತಯಾರಿಕೆ, ತೆಂಗುನಾರಿನ ಉತ್ಪಾದನೆಗಳು, ಸಾಬೂನು ಮತ್ತು ಕೊಬ್ಬರಿ ಎಣ್ಣೆ ಉದ್ಯಮಗಳು, ಬ್ಯಾಂಕ್ ಉದ್ಯಮಕ್ಕೆ ಮಂಗಳೂರು ಹೆಸರಾದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಕರ್ಣಾಟಕ, ಕೆನರಾ, ವಿಜಯಾ, ಸಿಂಡಿಕೇಟ್ ಮುಂತಾದ ಬ್ಯಾಂಕುಗಳು ನಗರದಲ್ಲಿ ಸಾಕಷ್ಟು ಶಾಖೆಗಳನ್ನು ಹೊಂದಿವೆ. ಮಂಗಳೂರು ಇಂದು ವಿಶೇಷವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ನಾಡಿನ ವಿವಿಧಕಡೆಗಳಿಗೂ ಜಿಲ್ಲೆಯ ಅನೇಕ ಸ್ಥಳಗಳಿಗೂ ಉತ್ತಮ ಮಾರ್ಗ ಸಂಪರ್ಕ ಹೊಂದಿದೆ. ಮುಂಬಯಿ, ಬೆಂಗಳೂರು, ಪಣಜಿಗಳಿಂದ ಇಲ್ಲಿಗೆ ವಿಮಾನ ಸೌಕರ್ಯವಿದೆ, ಮಂಗಳೂರಿನಿಂದ ಮುಂಬಯಿ, ಕೊಚ್ಚಿ ಮೊದಲಾದೆಡೆಗಳಿಗೆ ನೌಕಾ ಸಂಪರ್ಕವಿದೆ. ಈ ತನಕ ಇಲ್ಲಿದ್ದ ಬಂದರು ಮಧ್ಯಮವರ್ಗದ್ದು. ಇಡೀ ಜಿಲ್ಲೆಯಲ್ಲಿ ಬೆಳೆಯುವ ಅಡಿಕೆ, ತೆಂಗು ಮತ್ತು ಅದರ ಉತ್ಪಾದನೆಗಳು, ಹಾಸನ ಮತ್ತು ಕೊಡಗು ಜಿಲ್ಲೆಗಳಿಂದ ಬರುವ ಕಾಫಿ, ಏಲಕ್ಕಿ, ಮೆಣಸು ಇಲ್ಲಿಂದ ರಫ್ತಾಗುತ್ತಿದುವು. ಆದರೆ ಈ ಬಂದರನ್ನು ಮಳೆಗಾಲದಲ್ಲಿ ಉಪಯೋಗಿಸಲು ಆಗುತ್ತಿರಲಿಲ್ಲವಾದ್ದರಿಂದ ಮಂಗಳೂರಿನಿಂದ 9 ಕಿಮೀ ದೂರದಲ್ಲಿ ಗುರುಪುರ ನದಿಯ ಉತ್ತರದಲ್ಲಿ ಪಣಂಬೂರು ಗ್ರಾಮದ ಹತ್ತಿರ ಸರ್ವಋತು ಬಂದರು ನಿರ್ಮಾಣವಾಗಿದೆ. ಇಲ್ಲಿ ಸಾಮಾನ್ಯ ನೌಕಾಸಂಪರ್ಕಗಳಿಗಲ್ಲದೆ, ಕುದುರೆಮುಖದ ಕಬ್ಬಿಣದ ಅದುರನ್ನು ವಿದೇಶಗಳಿಗೆ ರಫ್ತು ಮಾಡಲೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಹೊಸ ಬಂದರು ಪಟ್ಟಣದ ಅಭಿವೃದಿಗೆ ಸಹಕಾರಿಯಾಗಲಿದೆ. ಮದರಾಸಿನಿಂದ ಕೊಯಮತ್ತೂರು, ಶೋರನೂರುಗಳ ಮುಖಾಂತರ ಈ ಊರಿಗೆ ಬ್ರಾಡ್‍ಗೇಜ್ ರೈಲು ಸಂರ್ಪಕವಿದೆ. ಆ ಮಾರ್ಗದಲ್ಲಿ ಇದೇ ಅಂತಿಮ ನಿಲ್ದಾಣ. ಈಗ ಮಂಗಳೂರು-ಹಾಸನ ರೃಲ್ವೆ ಮಾರ್ಗವಿದೆ. ಪಶ್ಚಿಮ ಕರಾವಳಿಯ ಬೃಹನ್ಮಾರ್ಗ ಈ ಊರಿನ ಮೂಲಕ ಹಾದು ಹೋಗುವುದಲ್ಲದೆ ಇಲ್ಲಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದೆಡೆಗಳಿಗೂ ಜಿಲ್ಲೆಯ ಅನೇಕ ಸ್ಥಳಗಳಿಗೂ ಉತ್ತಮ ರಸ್ತೆಗಳಿವೆ. ಮಂಗಳೂರು-ಪಾಣೆ ಮಂಗಳೂರು, ಮಂಗಳೂರು-ಗುರುಪುರ ಜಲಮಾರ್ಗ ಸಹ ಉಪಯುಕ್ತವಾಗಿದೆ.

	ಮಂಗಳೂರಿನಲ್ಲಿ ಅತ್ಯಂತ ಹಳೆಯ ಕಾಲೇಜುಗಳೆಂದರೆ ಸೇಂಟ್ ಅಲೊಸಿಯಸ್, ಸೇಂಟ್ ಆಗ್ನೆಸ್ ಮತ್ತು ಸರ್ಕಾರಿ ಕಾಲೇಜುಗಳು. ಹೊಸ ಕಾಲೇಜುಗಳೂ ಸಾಕಷ್ಟು ಇವೆ. ಅಲ್ಲದೇ ಒಂದು ಉಪಾದ್ಯಾಯ ತರಬೇತಿ ಕಾಲೇಜು ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಸಮಾಜ ಕಾರ್ಯಕರ್ತರ ತರಬೇತಿ ಸಂಸ್ಥೆ ಕೂಡ ಇವೆ. 1968 ರಿಂದ ಮೈಸೂರು ವಿಶ್ವವಿದ್ಯಾಲಯ ಮಂಗಳೂರು ಬಳಿಯ ಕೋಣಾಚೆಯಲ್ಲಿ ಮಂಗಳ ಗಂಗೋತ್ರಿ ಎಂಬ ಸ್ನಾತ್ತಕೋತ್ತರ ಕೇಂದ್ರವನ್ನು ತೆರೆದಿದ್ದು ಈಗ ಸ್ವತಂತ್ರ ಮಂಗಳೂರು ವಿಶ್ವವಿದ್ಯಾಲಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ನಾಡ್ ಸದಾಶಿವರಾಯ ಕೇಂದ್ರ ಗ್ರಂಥಾಲಯ, ಸರ್ಕಾರಿ ವಸ್ತುಸಂಗ್ರಹಾಲಯ ಮೊದಲಾದ ಸಂಸ್ಥೆಗಳಿವೆ. ಇಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಕಚೇರಿಗಳೂ ಮುನ್ಸೀಫ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳೂ ಒಂದು ಪೋಲೀಸ್ ತರಬೇತಿ ಕೇಂದ್ರವೂ ಇದೆ. ಗೃಹರಕ್ಷಕದಳ, ಅಗ್ನಿಶಾಮಕದಳ, ವೈದ್ಯಕೀಯ ಮತ್ತು ಇತರ ನಾಗರಿಕ ಸೌಕರ್ಯಗಳು ವ್ಯವಸ್ಥಿತವಾಗಿವೆ. 

	ಮಂಗಳೂರಿನಲ್ಲಿ ಅನೇಕ ದೇವಾಲಯ, ಮಸೀದಿ ಮತ್ತು ಇಗರ್ಜಿಗಳು ಇವೆ. ಇವುಗಳಲ್ಲಿ ಪ್ರಸಿದ್ಧವಾದ ಮಂಗಳಾದೇವಿ ದೇವಾಲಯವನ್ನು ಅತ್ತವರದ ಬಲ್ಲಾಳರು ಕಟ್ಟಿಸಿದರೆಂದು ಮತ್ಸ್ಯೇಂದ್ರನಾಥನ ಶಿಷ್ಯನಾದ ಗೋರಖನಾಥ ಈ ದೇವಾಲಯದ ಉದ್ಘಾಟನೆ ಮಾಡಿದನೆಂದು ಪ್ರತೀತಿ. ಆಳುಪ ವಂಶದ ದೊರೆ ಎರಡನೆಯ ಕುಂದವರ್ಮ 968 ರಲ್ಲಿ ಈ ದೇವಾಲಯವನ್ನು ಮತ್ತೆ ಕಟ್ಟಿಸಿದ. ಈಗಿರುವ ದೇವಾಲಯವನ್ನು ಬಿದನೂರಿನ ನಾಯಕರು ಕಟ್ಟಿಸಿದರೆಂದು ತಿಳಿದುಬಂದಿದೆ. 

	ಈಗ ಮಂಗಳೂರಿಗೆ ಸೇರಿದಂತಿರುವ ಕದ್ರಿಯಲ್ಲಿ ಪ್ರಸಿದ್ಧ ಮಂಜನಾಥ ದೇವಾಲಯವೂ ನಾಥಪಂಥದವರ ಜೋಗಿಮಠವೂ ಇವೆ. ಮತ್ಸೇಂದ್ರನಾಥ ಮತ್ತು ಗೋರಖ್‍ನಾಥ ಇಬ್ಬರೂ ಈ ಸ್ಥಳಕ್ಕೆ ಬಂದಿದ್ದರೆಂದು ಪ್ರತೀತಿ. ಇಲ್ಲಿ ಸ್ವಾಭಾವಿಕ ಚಿಲುಮೆಯನ್ನು ಒಳಗೊಂಡಿರುವ ಒಂಬತ್ತು ಕೊಳಗಳಿವೆ. ಕೆಲವು ಗುಹೆಗಳೂ ಇದ್ದು ಅವನ್ನು ಪಾಂಡವ ಗುಹೆಗಳೆಂದು ಕರೆಯುತ್ತಾರೆ. ಮಂಜುನಾಥ ದೇವಾಲಯ ಮೂಲತಃ ಸುಮಾರು 10ನೆಯ ಶತಮಾನದಲ್ಲಿ ಕಟ್ಟಲಾದುದು. ಈಗ ಈ ಭಾಗಕ್ಕೆ ಕೆಲವು ಸೇರ್ಪಡೆಗಳಾಗಿವೆ. ಇಲ್ಲಿಯ ಮೂಲ ಲಿಂಗವನ್ನು ವಾದಿರಾಜರು ಧರ್ಮಸ್ಥಳಕ್ಕೆ ಒಯ್ದರೆನ್ನಲಾಗಿದ್ದು, ಈಗ ಸ್ವಾಭಾವಿಕ ಕುಳಿಯೊಂದಕ್ಕೆ ಅರ್ಚನೆ ನಡೆಯುತ್ತದೆ. ಈ ದೇವಾಲಯದಲ್ಲಿರುವ ಪಂಚಲೋಹದ ಲೋಕೇಶ್ವರ ವಿಗ್ರ್ರಹದ ಪೀಠದ ಮೇಲೆ ಗ್ರಂಥಲಿಪಿಯಲ್ಲಿ ಬರೆದಿರುವ ಸಂಸ್ಕøತ ಶಾಸನದ ಪ್ರಕಾರ ಇದು ಸುಮಾರು 968ರಲ್ಲಿ ಆಳುಪ ದೊರೆ ಎರಡನೆಯ ಕುಂದವರ್ಮನಿಂದ ಪ್ರತಿಷ್ಠಾಪಿತವಾದz್ದÉಂದು ತಿಳಿದುಬರುವುದು. ವಿಗ್ರಹ 150 ಸೆಂಮೀ ಎತ್ತರವಿದ್ದು ಮೂರು ಶಿರಗಳಿಂದಲೂ ಆರು ಬಾಹುಗಳಿಂದಲೂ ಕೂಡಿದೆ. ಇಲ್ಲಿ 90 ಸೆಂಮೀ ಎತ್ತರವುಳ್ಳ ಪಂಚಲೋಹದ ಬುದ್ಧನ ಧ್ಯಾನಮೂರ್ತಿ 90 ಸೆಂಮೀ ಎತ್ತರವುಳ್ಳ ಪಂಚಲೋಹದ ಮಂಜನಾಥ ಮೂರ್ತಿಗಳಿವೆ. ದೇವಾಲಯದಲ್ಲಿ ಗಣಪತಿ, ಪಾರ್ವತಿ, ಸುಬ್ರಹ್ಮಣ್ಯ ಹಾಗೂ ಅಣ್ಣಪ್ಪ ಮತ್ತು ಪಂಜುರ್ಲಿ ಭೂತವಿಗ್ರ್ರಹಗಳು ಇವೆ. ನಾಥಪಂಥಕ್ಕೆ ಸೇರಿದ ಕೆಲವು ಶಾಸನಗಳೂ ವಿಜಯನಗರ ಕಾಲದ ದತ್ತಿಶಾಸನಗಳೂ ಇಲ್ಲಿವೆ. 

	ಮಂಗಳೂರಿನ ಇಗರ್ಜಿಗಳಲ್ಲಿ ಬೋಳಾರದ ರೋಸರಿ (ರೋಸೇರಿಯ) ಇಗರ್ಜಿ 1526ರಲ್ಲಿ ಕಟ್ಟಲಾದುದು. ಇದನ್ನು 1910ರಲ್ಲಿ ವಿಸ್ತರಿಸಿದೆ. ಸೇಂಟ್ ಅಲೋಸಿಯಸ್ ಕಾಲೇಜಿನ ಇಗರ್ಜಿಯನ್ನು 1885ರಲ್ಲಿ ಕೆ.ಜೋಸೆಫ್ ವಿಲ್ಲಿ ಎಂಬವರು ಕಟ್ಟಿಸಿದರು. ಇದು ರೋಮನ್ ಸೇಂಟ್ ಫಿಲಿಪ್ ನೇರಿ ಇಗರ್ಜಿ ಮಾದರಿಯಲ್ಲಿದೆ. ಇದರಲ್ಲಿ 1889ರಲ್ಲಿ ಇಟಲಿಯಿಂದ ಬಂದ ಪೋಷೆಮಿ ಎಂಬಾತ 1902 ರಿಂದ 1904ರ ಅವಧಿಯಲ್ಲಿ ಚಿತ್ರಿಸಿದ ಅಮೋಘ-ವರ್ಣಚಿತ್ರಗಳಿವೆ. ಬಲ್ಮಠದ ಶಾಂತಿ ಇಗರ್ಜಿಯನ್ನು 1862ರಲ್ಲಿ ಕಟ್ಟಲಾಯಿತು. ಇದು ಸ್ವಿಟ್ಜರ್ಲೆಂಡಿನ ಬಾಸೆಲ್ ಮಿಶನ್ ಹೌಸ್‍ನ ಮಾದರಿಯಲ್ಲಿ ಇದೆ. ಇದನ್ನು 1962ರಲ್ಲಿ ನವೀಕರಿಸಲಾಗಿದೆ. ಇವುಗಳ ಜೊತೆಗೆ ಕಾಂತಿ ಇಗರ್ಜಿ ಮತ್ತು ವಿಶ್ರಾಂತಿ ಇಗರ್ಜಿಗಳನ್ನು ಹೆಸರಿಸಬಹುದು. 

	ಮಂಗಳೂರಿನ ಬಂದರು ಪ್ರದೇಶಕ್ಕೆ ಸೇರಿದ ಹಾಗೆ ಇರುವ ಜೀನತ್ ಭಕ್ರ್ ಜುಮ್ಮಾ ಮಸೀದಿ ಪ್ರಸಿದ್ಧವಾದದ್ದು. ಇದನ್ನು ಬಹು ಹಿಂದೆ ಮಲಿಕ್ ದೀನಾರ್ ಎಂಬ ಸಂತನ ನೇತೃತ್ವದಲ್ಲಿ ಮಂಗಳೂರಿಗೆ ಬಂದ ಅರಬ್ಬೀ ಜನ ಕಟ್ಟಿಸಿದರೆಂದು ಪ್ರತೀತಿ. ಆದರೆ ಈಗಿನ ಕಟ್ಟಡ ಹೊಸದು. ಈ ಮಸೀದಿಯ ಮರದ ಕಂಬಗಳು ಮತ್ತು ಪ್ರಾರ್ಥನಾ ಜಗತಿಗಳು ಆಕರ್ಷಕ ಕೆತ್ತನೆಗಳಿಂದ ಕೂಡಿವೆ. ಲೈಟ್ ಹೌಸ್ ಬೆಟ್ಟದಲ್ಲಿರುವ ಈದ್‍ಗಾ ಮಸೀದಿಯನ್ನು ಟಿಪ್ಪು ಸುಲ್ತಾನ್ ಕಟ್ಟಿಸಿದನೆಂದು ಪ್ರತೀತಿ. ಡೋಂಗರಕೇರಿಯಲ್ಲಿರುವ ಷಾ ಅಮೀರರ ಮಸೀದಿ ಸುಮಾರು ಎರಡು ಶತಮಾನಗಳಷ್ಟು ಹಳೆಯದು. ಇದರ ಸಮೀಪದಲ್ಲೇ ಷಾ ಅಮೀರ ಎಂಬ ಸಂತನ ದರ್ಗಾ ಸಹ ಇದೆ.

	ಇಂದಿನ ಮಂಗಳೂರು ಮಿತಿಯೊಳಗೆ ವಿವಿಧ ಕಾಲಗಳಲ್ಲಿ ನಾಲ್ಕು ಕೋಟೆಗಳಿದ್ದವೆಂದು ಹೇಳುವರು. ಮೊದಲನೆಯದು, ಬಿದನೂರಿನ (ಇಕ್ಕೇರಿ) ಬಸವಪ್ಪ ನಾಯಕ (1939-54) ಕಟ್ಟಿಸಿದ ಮಂಗಳೂರು ಕೋಟೆ. ಇದನ್ನು ಸುಮಾರು 1784ರಲ್ಲಿ ಟಿಪ್ಪು ಸುಲ್ತಾನ್ ಕೆಡವಿಸಿದ. ಎರಡನೆಯದು, 1568ರಲ್ಲಿ ಪೋರ್ಚುಗೀಸರು ಕಟ್ಟಿದ ಸೇಂಟ್ ಸೆಬಾಸ್ಟಿಯನ್ ಕೋಟೆ. ಮೂರನೆಯದು ಕೆಲವು ಹಳೆಯ ದಾಖಲೆಗಳ ಪ್ರಕಾರ ಇತ್ತೆಂದು ಹೇಳುವ ಲೈಟ್‍ಹೌಸ್ ಹಿಲ್ ಕೋಟೆ. ನಾಲ್ಕನೆಯದು, ಉರ್ವದ ಹತ್ತಿರ ಬಂಗನಾಯಕ ಕಟ್ಟಿಸಿದ ಬಂಗರ ಕೋಟೆ. ಇದನ್ನು ಇಕ್ಕೇರಿಯ ವೆಂಕಟಪ್ಪನಾಯಕ ಕೆಡವಿದನೆಂದು ಹೇಳುವರು. ಇಂದು ಮಂಗಳೂರು ಕೋಟೆ ಮತ್ತು ಸೆಬಾಸ್ಟಿಯನ್ ಕೋಟೆಗಳ ಅವಶೇಷಗಳು ಮಾತ್ರ ಉಳಿದಿವೆ. ಗುರುಪುರ ಹೊಳೆಗೆ ಶತ್ರುಗಳ ದೋಣಿಗಳು ಪ್ರವೇಶಿಸದಂತೆ ನೋಡಿಕೊಳ್ಳಲು ಟಿಪ್ಪು ಸುಲ್ತಾನ ಕಟ್ಟಿಸಿದ ಸುಲ್ತಾನ್ ಬತೇರಿ ಇದೆ.

	ಮಂಗಳೂರಿನ ವಿಹಾರ ಕೇಂದ್ರಗಳಲ್ಲಿ ಕೋರ್ಟ್‍ಹಿಲ್ ಬಹು ಸುಂದರ ಪ್ರದೇಶ. ಈ ಬೆಟ್ಟದ ಮೇಲೆ ನಿಂತು ಇಡೀ ಮಂಗಳೂರು ನಗರವನ್ನೂ ಸಮುದ್ರದ ಹಿನ್ನೀರನ್ನೂ ನೋಡಬಹುದು. ಇದರಂತೆ ಕೇಂದ್ರ ಮೈದಾನ ಮತ್ತು ಉರ್ವ ಮೈದಾನ ಪ್ರದೇಶಗಳು ವಿಹಾರಕ್ಕೆ ಮೀಸಲಾಗಿವೆ. ನಗರ ಮಧ್ಯದಲ್ಲಿರುವ ಬಾವುಟ ಗುಡ್ಡದಮೇಲೆ ಹಳೆಯ ಲೈಟ್‍ಹೌಸ್ ಇದ್ದು ಅದರ ಸುತ್ತಲೂ ಸುಂದರ ಉದ್ಯಾನವಿದೆ. ಹೊಸ ಲೈಟ್‍ಹೌಸನ್ನು 1900ರಲ್ಲಿ ಕಟ್ಟಲಾಯಿತು. ಇದರ ಗೋಪುರ 14.63 ಮೀಟರ್ ಎತ್ತರವಿದ್ದು 17 ಕಿಮೀ ವರೆಗೂ ಬೆಳಕು ಬೀರಬಲ್ಲದಾಗಿದೆ.

	ಈ ಊರಿಗೆ ಮಂಗಳೂರು ಎಂದು ಹೆಸರು ಇಲ್ಲಿರುವ ಪ್ರಸಿದ್ಧ ಮಂಗಳಾದೇವಿ ದೇವಾಲಯದಿಂದ ಬಂತೆಂದು ಹೇಳಲಾಗಿದೆ. ಈ ಊರಿಗೆ ಕೊಡಿಯಾಲ ಬಂದರು ಎಂದು ಹೆಸರು ಸ್ಥಳೀಯವಾಗಿ ಪ್ರಚಲಿತವಾಗಿದೆ. ಮಂಗಳೂರು ನದಿಗಳ ಸಂಗಮ ಸ್ಥಳದಲ್ಲಿರುವುದರಿಂದ ತುಳುಭಾಷೆಯಲ್ಲಿ ಈ ನಗರವನ್ನು ಕುಡಾಲ ಎಂದು ಕರೆಯುತ್ತಿದ್ದರು. ಕುಡಾಲವೆಂದರೆ ಕೂಡಲವೆಂದು ಅರ್ಥ. ರೋಮನ್ ಇತಿಹಾಸಕಾರ ಪ್ಲಿನಿ (ಕ್ರಿ.ಶ. 1ನೆಯ ಶತಮಾನ) ಹೆಸರಿಸುವ ನಿಟ್ರಿಯಾಸ್ ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲಮಿ ಹೆಸರಿಸಿರುವ ನಿತ್ರೆ ಇವು ನೇತ್ರಾವತಿ ನದಿ ದಡದ ಮಂಗಳೂರಿಗೆ ಅನ್ವಯವಾಗುವುದು ಎನ್ನಲಾಗಿದೆ. ರೋಮನ್ ಗ್ರಂಥ ಕರ್ತೃ ಅರಿಯನ್ ಮಂಗಳೂರನ್ನು ಮುಂಡೆಗೋರ ಎಂದು ಕರೆದಿದ್ದಾನೆ. ಪ್ರಾಚೀನ ಕ್ರಿಶ್ಚಿಯನ್ ಭೂಗೋಳದಲ್ಲಿ ಮಂಗಳೂರನ್ನು ಮಂಗರೌತ್ ಎಂದು ಕರೆಯಲಾಗಿದೆ. 7 ನೆಯ ಶತಮಾನದ ಒಂದು ತಾಮ್ರ ಶಾಶನದಲ್ಲಿ ಮಂಗಳೂರನ್ನು ಮಂಗಳಾಪುರ ಎಂದು ಹೆಸರಿಸಲಾಗಿದೆ. ಅರಬ್ಬರು ಈ ಊರನ್ನು ಮಂಜದೂರ್ ಎಂದು ಕರೆಯುತ್ತಿದ್ದರು. 

	ಮಂಗಳೂರಿನ ಪ್ರಾಚೀನ ಇತಿಹಾಸ ಅಸ್ಪಷ್ಟ. ಇದು 10-12ನೆಯ ಶತಮಾನದ ಸುಮಾರಿಗೆ ಆಳುಪ ಅರಸರಿಗೆ ಸೇರಿತ್ತೆನಿಸುತ್ತದೆ. 1342ರಲ್ಲಿ ಮಂಗಳೂರಿಗೆ ಭೇಟಿ ಇತ್ತಿದ್ದ ಇಬ್ನ್ ಬತೂತ ಇಲ್ಲಿ ಪರ್ಷಿಯಾ ಮತ್ತು ಯೆಮೆನ್ ವರ್ತಕರಿದ್ದರೆಂದು ಹೇಳಿದ್ದಾನೆ. 1448ರಲ್ಲಿ ವಿಜಯನಗರಕ್ಕೆ ಹೋಗುವ ಮಾರ್ಗದಲ್ಲಿ ಪರ್ಷಿಯಾದ ರಾಯಭಾರಿ ಅಬ್ದುಲ್ ರಜಾಕ್ ಮಂಗಳೂರಿಗೆ ಬಂದಾಗ ಭವ್ಯ ದೇವಾಲಯವೊಂದನ್ನು ಕಂಡನೆಂದು ತಿಳಿದು ಬಂದಿದೆ. 1505ರಲ್ಲಿ ವಿಜಯನಗರದ ಅರಸರು ಪೋರ್ಚುಗೀಸರಿಗೆ ಕೋಠಿ ಕಟ್ಟಿಕೊಳ್ಳಲು ಅನುಮತಿ ಕೊಟ್ಟರು. 1526ರಲ್ಲಿ ಮಂಗಳೂರು ಪೋರ್ಚುಗೀಸರ ವಶವಾಯಿತು. 1555ರಲ್ಲಿ ಮಂಗಳೂರನ್ನು ಹೊಸದಾಗಿ ಕಟ್ಟಿದರು. ಬಿದನೂರಿನ ನಾಯಕರಿಗೂ ಪೋರ್ಚುಗೀಸರಿಗೂ ಆದ ಒಪ್ಪಂದದಂತೆ 1670ರಲ್ಲಿ ಪೋರ್ಚುಗೀಸರು ಮಂಗಳೂರಿನಲ್ಲಿ ಒಂದು ಕೋಠಿಯನ್ನು ಕಟ್ಟಿದರು. ಅರಬ್ಬರ ವ್ಯಾಪಾರಕ್ಕೆ ಇವರು ತಡೆಯೊಡ್ಡಿದಾಗ 1695ರಲ್ಲಿ ಮಂಗಳೂರನ್ನು ಅರಬ್ಬರು ಸುಟ್ಟರು. ಬಿದನೂರಿನ ನಾಯಕರ ಅಪ್ಪಣೆ ಪಡೆದು ಪೋರ್ಚುಗೀಸರು ಮತ್ತೆ 1714ರಲ್ಲಿ ಕೋಠಿ ಕಟ್ಟಿಕೊಂಡರು. 1763ರಲ್ಲಿ ಹೈದರ್ ಆಲಿಯ ವಶವಾಗಿದ್ದ ಮಂಗಳೂರು 1768ರಲ್ಲಿ ಇಂಗ್ಲೀಷರ ವಶವಾಯಿತು. 1794ರಲ್ಲಿ ಟಿಪ್ಪುಸುಲ್ತಾನ್ ಮಂಗಳೂರನ್ನ ವಶಪಡಿಸಿಕೊಂಡ. ಆದರೆ ಶ್ರೀರಂಗಪಟ್ಟಣದ ಪತನದೊಂದಿಗೆ 1799ರಲ್ಲಿ ಮಂಗಳೂರು ಮತ್ತೆ ಬ್ರಿಟೀಷರ ವಶವಾಯಿತು. ಅಂದಿನಿಂದ ಮದರಾಸು ಪ್ರಾಂತ್ಯದಲ್ಲಿದ್ದ ಈ ಊರು, 1956ರಲ್ಲಿ ಕರ್ನಾಟಕ ರಾಜ್ಯಕ್ಕೆ ಸೇರಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ